ನಮ್ಮ ಭಾರತದಲ್ಲಿ ಇಂದಿಗೂ ಕೂಡ ಮಹಿಳೆಯರಿಗೆ ಸಿಗಬೇಕಾದಂತಹ ಹಕ್ಕುಗಳು ಸರಿಯಾಗಿ ಸಿಕ್ಕಿಲ್ಲ. ಮಹಿಳೆ ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರದಲ್ಲೂ ತನ್ನ ಸಾಧನೆ ತೋರಿದ್ದಾಳೆ ಎಂದು ಹೇಳುವ ಮಾತು ಕೆಲವೊಂದು ಕಡೆ ಈಗಲೂ ಸುಳ್ಳು ಎನಿಸುತ್ತದೆ. ಏಕೆಂದರೆ ಮನೆ ಮತ್ತು ಕಚೇರಿ ಕೆಲಸಗಳನ್ನು ತುಂಬಾ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸುವ ಹೆಣ್ಣುಮಕ್ಕಳಿಗೆ ಒಂದಿಲ್ಲೊಂದು ಕಾರಣದಿಂದ ಶೋಷಣೆ ನಡೆಯುತ್ತಲೇ ಬಂದಿದೆ. ಇದನ್ನು ಕೆಲವರು ಮಹಿಳೆಯರ ದೌರ್ಬಲ್ಯ ಎಂದರೆ, ಇನ್ನೂ ಕೆಲವರು ಮಹಿಳೆಯರಿಗೆ ಇರುವ ಅಪಾರವಾದ ತಾಳ್ಮೆ ಕೆಲವೊಮ್ಮೆ ಇಂತಹ ಅಹಿತಕರ ಸಂದರ್ಭಗಳನ್ನು ಎದುರಿಸುವಂತೆ ಮಾಡುತ್ತದೆ ಎಂದು ಹೇಳುತ್ತಾರೆ. ಅದೇನೇ ಇರಲಿ, ನಮ್ಮ ಭಾರತ ದೇಶದಲ್ಲಿ ಕಾನೂನು ಪ್ರತಿಯೊಬ್ಬರಿಗೂ ಒಂದೇ. ಹಲವರಿಗೆ ತಮ್ಮ ಹಕ್ಕುಗಳ ಬಗ್ಗೆ ಇಂದಿಗೂ ಅರಿವಿಲ್ಲ. ಕೆಲವು ಕ್ಲಿಷ್ಟ ಸಂದರ್ಭಗಳಲ್ಲಿ ತಮ್ಮ ಪರವಾಗಿ ಯಾರೂ ನಿಲ್ಲದಿದ್ದರೂ ಕಡೇಪಕ್ಷ ಕಾನೂನು ನಿಲ್ಲುತ್ತದೆ ಎಂಬುದನ್ನು ಮರೆತೇಬಿಟ್ಟಿರುತ್ತಾರೆ. ಹಾಗಾಗಿ ಮನೆ, ಕಚೇರಿ, ಮಾರುಕಟ್ಟೆ ಅಷ್ಟೇ ಏಕೆ ಆರಕ್ಷಕ ಠಾಣೆಗಳಲ್ಲೂ ಕೂಡ ಕೆಲವೊಮ್ಮೆ ಮಹಿಳೆಯರ ವಿರುದ್ಧ ಅನೇಕ ಬಗೆಯ ಶೋಷಣೆಗಳು ಬಹಳ ಹಿಂದಿನಿಂದಲೂ ನಡೆಯುತ್ತಲೇ ಬಂದಿವೆ, ಈಗಲೂ ನಡೆಯುತ್ತಲೇ ಇವೆ. ನಮ್ಮ ಭಾರತ ಸಂಪ್ರದಾಯಬದ್ಧವಾದ ದೇಶ. ಹಿಂದಿನ ಕಾಲದಲ್ಲಿ ವಿದ್ಯೆ ಕೇವಲ ಪುರುಷರಿಗೆ ಮಾತ್ರ ಸೀಮಿತ. ಮಹಿಳೆಯರಿಗೆ ಅಲ್ಲ ಎನ್ನುವ ಮನೋಭಾವದಲ್ಲಿದ್ದ ದೇಶ. ಕೆಲವೊಂದು ಕೆಳವರ್ಗದ ಮತ್ತು ಬುಡಕಟ್ಟು ಜನಾಂಗದ ಮಧ್ಯೆ ಈ ಪದ್ಧತಿ ಈಗಲೂ ಜಾರಿಯಲ್ಲಿದೆ. ಆದರೆ ಈ ಎಲ್ಲಾ ಅಡೆತಡೆಗಳನ್ನು ದಾಟಿ ಸಂವಿಧಾನದಲ್ಲಿ ತನಗಾಗಿ ರೂಪುಗೊಂಡ ತನ್ನ ಹಕ್ಕುಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಖಂಡಿತ ತನ್ನನ್ನು ತಾನು ಎಂತಹ ಸಂದರ್ಭಗಳಲ್ಲಿಯೂ ಸಹ ಏಕಾಂಗಿಯಾಗಿ ರಕ್ಷಿಸಿಕೊಳ್ಳುವಂತಹ ಒಂದು ಶಕ್ತಿ ಮಹಿಳೆಯರಿಗೆ ಸಿಗುತ್ತದೆ. ಈ ಲೇಖನದಲ್ಲಿ ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗೆ ಯಾವೆಲ್ಲಾ ಹಕ್ಕುಗಳನ್ನು ಪ್ರತಿಪಾದಿಸಲಾಗಿದೆ ಎಂದು ತಿಳಿಸುವ ಮತ್ತು ಮಹಿಳೆಯರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸುವ ಒಂದು ಸಣ್ಣ ಪ್ರಯತ್ನ ಮಾಡಲಾಗಿದೆ.
Category
📚
Learning